Monday, 25 May 2020

ಸೀತೆಗೊಂದು ಶಾಪ*

*ಸೀತೆಗೊಂದು ಶಾಪ*
🌲🌲🌲🌲🌲🌲🌲

ಪ್ರೀಯ ಗೆಳೆಯರೇ....

ಅವಳು ಸುಜಾತ. ನವ ಮಾಸಗಳು ತುಂಬಿಕೊಂಡ ತುಂಬು ಗರ್ಭಿಣಿ.ತಮಸಾ ನದಿ ತೀರದ ಉದ್ದಾಲಕ ಋಷಿವರ್ಯರ ಆಶ್ರಮದಲ್ಲಿ ಸಂಭ್ರಮ ತುಂಬಿಕೊಳ್ಳಬೇಕಾದ ಜಾಗದಲ್ಲಿ ಬಡತನ ಹೊದ್ದು ಮಲಗಿಕೊಂಡಿತ್ತು. 
   ಹೌದು ತನ್ನ ಮಗಳನ್ನು ಮತ್ತೊಂದು ಜೀವದಂತೆ ಬೆಳೆಸಿದ್ದ ಉದ್ದಾಲಕ ಋಷಿಗಳು ತಾನು ಅತ್ಯಂತ ಪ್ರೀತಿಸುವ ಮಗಳು ತನ್ನ ಕಣ್ಣ ಮುಂದೆಯೇ ಇರಬೇಕೆಂಬ ಒತ್ತಾಸೆಯಿಂದ ತನ್ನದೇ ಪ್ರೀತಿಯ ಶಿಷ್ಯನಾದ ಕಾಕೋಡನಿಗೆ ಮದುವೆ ಮಾಡಿ ಆಶ್ರಮದಲ್ಲೇ ಇರುವಂತೆ ನೋಡಿಕೊಂಡಿದ್ದರು. ಹೀಗೆ ಸುಜಾತಳಿಗೆ ಮದುವೆ ಮಾಡಿಕೊಟ್ಟ ಘಳಿಗೆಯಲ್ಲಿ ಅವಳ ತಾಯಿ ಮತ್ತೊಂದು ಮಗುವಿಗೆ ಜನ್ಮ ನೀಡಿ ಶ್ವೇತಕೇತು ಅನ್ನುವ ತಮ್ಮ ಹುಟ್ಟಿಕೊಂಡಿದ್ದ. ಹೀಗಾಗಿ ಸದಾ ಸಹಾಯ ಮಾಡುವ ಅಪ್ಪನಾದ ಉದ್ದಾಲಕರ ಸಹಾಯವೂ ಇಲ್ಲವಾಗುತ್ತದೆ. 
    ಇಂತಹ ಕಠೀಣತಮವಾದ ಸಮಯದಲ್ಲಿ ಆಶ್ರಮದ ಅಂಗಳದಲ್ಲಿ ಹೊಸ ಸುದ್ದಿಯೊಂದು ಬಂದು ನಿಂತಿತ್ತು. ಜನಕ ಪಟ್ಟಣದ ದೊರೆಯಾದ ಜನಕ ವೇದ ಪಂಡಿತರ ಪಂಥವನ್ನು ಇಟ್ಟುಕೊಂಡಿದ್ದಾನಂತೆ. ಯಾರು ವೇದ ವೇದಾಂಗಗಳ ಚರ್ಚೆಯಲ್ಲಿ ಜನಕರಾಯನ ಪಂಡಿತರನ್ನು ಗೆಲ್ಲುತ್ತಾರೋ ಅವರಿಗೆ ಸಾವಿರ ಗೋವುಗಳು ಮತ್ತು ಸಾವಿರ ಚಿನ್ನದ ನಾಣ್ಯಗಳನ್ನು ಕೊಟ್ಟು ಸನ್ಮಾನಿಸುತ್ತಾರಂತೆ. ಯಾರು ಸೋಲುತ್ತಾರೋ ಅವರನ್ನು ನೀರಿನಲ್ಲಿ ಮುಳುಗಿಸಿ ಸಾಯಿಸುತ್ತಾರಂತೆ ಎಂಬ ಪಂಥದ ವಾರ್ತೆಯನ್ನು ಕೇಳಿ ಸುಜಾತಳ ಗಂಡನಾದ ಕಾಕೋಡನ ಕಿವಿ ನಿಮಿರಿಕೊಂಡು ನಿಂತಿತ್ತು.
    ಅದಾಗಲೇ ಪಂಥವನ್ನು ಮಾನಸವಾಗಿ ಸ್ವೀಕರಿಸಿದ ಕಾಕೋಡ ವೇದ ಮಂತ್ರಗಳನ್ನು ಉರು ಹೊಡೆಯಲಾಂಭಿಸಿಕೊಂಡಿದ್ದ. ಗಂಡನ ನಿರ್ಧಾರವನ್ನು ವಿರೋಧಿಸಲಾಗದೆ, ಗಂಡನಿಗೆ ಬರಬಹುದಾದ ಗಂಡಾಂತರವನ್ನು ಸ್ವೀಕರಿಸಲಾಗದೆ ಬವಣೆಗಿಳಿಯುತ್ತದೆ ಸುಜಾತಳ ಮುಗ್ಧ ಮನಸ್ಸು. ಹೊತ್ತಲ್ಲದ ಹೊತ್ತಿನಲ್ಲಿ ವೇದ ಪಾರಾಯಣ ಮಾಡಿದರೆ ಪುಣ್ಯ ಕ್ಷಯವಾಗಿ ಮತ್ತಷ್ಟು ದಾರಿದ್ಯ ಬರಬಹುದು ಎಂದು ಗಂಡನನ್ನು ಎಚ್ಚರಿಸುತ್ತಾಳೆ. ಗಂಡನ ನಿರ್ಧಾರವನ್ನು ಬದಲಿಸುವಂತೆ ಪರಿಪರಿಯಾಗಿ ಬೇಡುತ್ತಾಳೆ. "ಜನಕ ಮಹರಾಜ ರಾಜರ್ಷಿ ಅನಿಸಿಕೊಂಡರೂ, ಆತನ ಈ ವಿಚಿತ್ರ ಪಂಥದಿಂದ ಅದಾಗಲೇ ಅನೇಕ ಮಾಂಗಲ್ಯಗಳು ಕಳಚಿಕೊಂಡಿವೆಯಂತೆ, ಎಷ್ಟೋ ಮಕ್ಕಳು ಅಪ್ಪನನ್ನು ಕಳೆದುಕೊಂಡು ಅನಾಥರಾಗಿದ್ದಾರಂತೆ, ಅದೆಷ್ಟೋ ಸಂಸಾರಗಳು ಬೀದಿ ಪಾಲಾಗಿವೆಯಂತೆ, ಸ್ವಾಮಿ ರಾಜನ ಈ ಹುಚ್ಚು ಪಂಥದಿಂದ ನನಗೆ ಭಯವಾಗುತ್ತಿದೆ. ಬಡತನವಾದರೂ, ಇರುವುದರಲ್ಲಿಯೇ ಸುಖವಾಗಿ ಬಾಳೋಣ." ಕಂಡ ಕಂಡಲ್ಲಿ ಕೈ ಮುಗಿದು ಬೇಡುತ್ತಾಳೆ ಸುಜಾತ. 
  ತನ್ನ ವಿದ್ವತ್ತು ಮತ್ತು ಜನಕನ ಪಂಥ ಮೊತ್ತದ ಗುಂಗಿನಲ್ಲಿ ಮೈಮರೆತ್ತಿದ್ದ ಕಾಕೋಡನಿಗೆ ಪತ್ನಿಯ ಮಾತುಗಳು ರುಚಿಸುವುದಿಲ್ಲ. ಪತ್ನಿ ಬೇಡವೆಂದಾಗಲೆಲ್ಲಾ ಜನಕ ನ್ಯಾಯದ ಪರ ಅನ್ನುವ ಗಂಡನ ದರ್ಪದ ನುಡಿಯ ಮುಂದೆ ಅಡಕತ್ತರಿಯಾಗುತ್ತದೆ ಸುಜಾತಳ ಬಾಳು. 
    ಅದೊಂದು ದಿನ ಕಾಕೋಡ ಮುನಿ ದಣಿದು ಸುಜಾತಳ ಮಡಿಲಿಗೆ ತಲೆಯಿಟ್ಟು ಮಲಗಿದ್ದಾನೆ. ತನ್ನ ಪತಿಯೇ ದೇವರೆಂದು ತಿಳಿದ ಸುಜಾತ ಪತಿಗೆ ಗಾಳಿ ಬೀಸುತ್ತಿದ್ದಾಳೆ. ಕಾಕೋಡನ ವೇದ ಮಂತ್ರ ಅನುರಣಿಸುತ್ತಿತ್ತು. ನಿದ್ದೆಯ ಜೋಂಪಿನಲ್ಲಿದ್ದ ಕಾಕೋಡನ ತಪ್ಪು ಉಚ್ಚಾರಣೆ ಮಾಡುತ್ತಾನೆ. ಸುಜಾತೆಯ ಗರ್ಭದಲ್ಲಿ ಇದನ್ನು ಕೇಳುತ್ತಿದ್ದ ಮಗು ಅಪ್ಪ ತಪ್ಪು ಉಚ್ಛಾರ ಮಾಡಿದಾಗ ತಡೆಯಲಾರದೇ ನಗುತ್ತದೆ. ಕಾಕೋಡನಿಗೆ ಅವಮಾನ ತಡೆಯಾದಾಗುತ್ತದೆ. ಗರ್ಭದಿಂದ ಹೊರ ಬರವ ಮುನ್ನವೇ ತಂದೆಗೆ ಪಾಠವೇ? ಕಾಕೋಡನ ಕೋಪ ಮುಗಿಲು ಮುಟ್ಟಿತ್ತು. ನೀನು ಅಷ್ಟಾವಕ್ರನಾಗಿ ಹುಟ್ಟು ಅನ್ನುವ ಮಾತು ಕೋಪದ ಬರದಲ್ಲಿ ಬಾಯಿಯಿಂದ ಹೊರಬಂದಿತ್ತು. ದ್ವಂದ್ವದತ್ತ ಮುಖಮಾಡಿ ನಿಂತಿತ್ತು ಸುಜಾತಳ ಬದುಕು. 
  ಅದೊಂದು ದಿನ ಪಂಥದಲ್ಲಿ ಗೆದ್ದು ಬರುತ್ತೇನೆ ಎಂದು ಜೋಲಿಗೆ ಹೆಗಲಿಗೇರಿಸಿಕೊಂಡು ಹೋದ ಕಾಕೋಡ ಜನಕನ ಅಂಗಳದಲ್ಲಿ ಬಂಧಿಯಾಗಿ ಜಲ ಸಮಾಧಿಯಾದ ಅನ್ನುವ ಸುದ್ದಿ ಸುಜಾತೆಯನ್ನು ಕೆರಳಿಸುತ್ತದೆ. ಒಂದೆಡೆ ಮಗು ಅಂಗಹೀನ. ಮತ್ತೊಂದೆಡೆ ಗಂಡನನ್ನು ಕಳೆದುಕೊಂಡ ನೋವು. ಇನ್ನೊಂದೆಡೆ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಹೇಯ ಜೀವನದಿಂದ ಹೈರಾಣಳಾಗುತ್ತಾಳೆ ಸುಜಾತ. 
   ಅದೊಂದು ದಿನ ತನ್ನ ಮಗ ಅಷ್ಟಾವಕ್ರ ಅಜ್ಜನಾದ ಉದ್ದಾಲಕನ ತೊಡೆ ಏರಿಕೊಂಡಿದ್ದ. ಇದನ್ನು ಕಂಡ ಅದೇ ವಯಸ್ಸಿನ ಸುಜಾತಳ ತಮ್ಮನಾದ ಶ್ವೇತಕೇತು ತನ್ನ ತಂದೆಯ ತೊಡೆ ಏರಿದ ಅಷ್ಟಾವಕ್ರನನ್ನು ಎಳೆದು ಹಾಕಿ ಇದು ನನ್ನ ತಂದೆಯ ತೊಡೆ. ನೀನು ಏರ ಕೂಡದು ಅನ್ನುವ ನುಡಿ ಸುಜಾತಳನ್ನು ಮೌನಿಯಾಗಿಸಿದೆ. ನನ್ನ ಅಪ್ಪ ಯಾರಮ್ಮ ಎಂದು ಅತ್ತು ಕೇಳುವ ಮಗುವನ್ನು ಹೊತ್ತು ಕತ್ತಲ ಕಡೆಗೆ ಸಾಗುತ್ತಿದ್ದಾಳೆ. ಈಗೀಗ ವಿಧಿ ತನ್ನ ಬಾಳಿನಲ್ಲಿ ಆಡಿದ ಆಟದಿಂದ ಮೌನ ಮತ್ತು ಏಕಾಂತವೇ ಅತ್ಯಂತ ಪ್ರಿಯವಾಗುತ್ತದೆ. ಎಲ್ಲರಿಂದ ದೂರವಿರುವುದೇ ದಿನಚರಿಯಾಗುತ್ತದೆ. 
   ಹೀಗೆ ಕತ್ತಲಲ್ಲಿ ಕೂತ ಸುಜಾತೆಗೆ ಅದೊಂದು ದಿನ ಉದ್ದಾಲಕನ ಆಶ್ರಮದಲ್ಲಿ ಡಂಗೂರದ ಸದ್ದು ಎದ್ದು ಕೇಳುತ್ತದೆ. ಜನಕ ರಾಯನಿಗೆ ಹೆಣ್ಣು ಮಗುವಾದ ಸುದ್ದಿಯನ್ನು ಬಿತ್ತಿಕೊಂಡು ಹೋಗುತ್ತಿದ್ದರು ಡಂಗೂರದ ಜನರು.
ಡಂಗೂರವನ್ನು ಕೇಳುತ್ತಾ ಕೇಳುತ್ತಾ ಸುಜಾತ ಕೆಣಲಿ ಕೆಂಡವಾಗುತ್ತಾಳೆ. ಕೋಪ ತಡೆಯಲಾರದೇ ಹೊರಗೋಡಿ ಬರುತ್ತಾಳೆ. "ಅನೇಕ ವೇದ ಪಂಡಿತರನ್ನು ಜಲಸಮಾಧಿ ಮಾಡಲು ಕಾರಣನಾದ ಜನಕ ಮಹಾರಾಜ ಮಹಾಪಾಪಿಯೇ ಹೊರತು ಜ್ಞಾನಿ, ರಾಜರ್ಷಿ ಎಂಬ ಬಿರುದುಗಳೆಲ್ಲಾ ಇವನಿಗೆ ಸಲ್ಲತಕ್ಕದ್ದಲ್ಲ. ಎಷ್ಟೋ ಜನ ಹೆಣ್ಣುಮಕ್ಕಳ ಕಣ್ಣೀರಿಗೆ ಕಾರಣನಾದ ಇವನಿಗೆ ಶಿಕ್ಷೆಯಾಗಲೇಬೇಕು. ಪತಿಯಿಂದ ಕಾರಣವಿಲ್ಲದೇ ದೂರವಾಗಿ ನಾನು ಪರಿತಪಿಸುತ್ತಿರುವಂತೆ ಜನಕನ ಹೆಣ್ಣುಮಕ್ಕಳೂ ಪರಿತಪಿಸಲಿ' ಎನ್ನುತ್ತಾ ನೆಲ ಮುಟ್ಟಿಕೊಂಡಳು. ಶಾಂತವಾದ ಪ್ರಕೃತಿ ಸುಜಾತೆಯ ಶಾಪವನ್ನು ಮತ್ತೆ ಮತ್ತೆ ಪ್ರತಿಧ್ವನಿಸಿತು. ಕಾಕೋಡನನ್ನು ಬಲಿ ಪಡೆದ ತಮಾಸ ನದಿಯ ಅಲೆ ಅಲೆಗಳೂ ಅನುರಣಿಸಿದವು. ಸುಜಾತೆಯ ಶಾಪವನ್ನು ಹೊತ್ತು ದೂರ ದೂರ ಜನಕ ತೀರದತ್ತ ಮೌನವಾಗಿ ಧುಮ್ಮಿಕ್ಕುತ್ತಿತ್ತು.

✍🏻 *ಚಂದ್ರಕಾಂತ ಶೆಟ್ಟಿ ಕಾರಿಂಜ*

,(ವಾಟ್ಸಪ್ ಕೃಪೆ)

No comments:

Post a Comment